	ಆಡಳಿತ ವ್ಯವಸ್ಥೆಯಲ್ಲಿ ನಡೆಯಬಹುದಾದ ಭ್ರಷ್ಟಾಚಾರ ಹಾಗೂ ಲಂಚ ಪ್ರಕರಣಗಳನ್ನು ಪತ್ತೆಹಚ್ಚಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಸ್ವಚ್ಛ ಆಡಳಿತಕ್ಕೆ ಅನುವು ಮಾಡಿಕೊಡುವ ಉದ್ದೇಶವುಳ್ಳ ಒಂದು ವ್ಯವಸ್ಥೆ. ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ದೇಶಗಳಲ್ಲಿ ಆಡಳಿತಾತ್ಮಕ ಕಾನೂನು ಪರಿಣಾಮಕಾರಿಯಾಗಿ ಕೆಲಸಮಾಡುತ್ತಿದ್ದರೂ ದುರಾಡಳಿತ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿತು. ಇದರಿಂದಾಗಿ ಸಾಮಾಜಿಕ ಹಾಗೂ ಆರ್ಥಿಕ ಕಾರ್ಯಕ್ರಮಗಳು ಯಶಸ್ವಿಯಾಗದೆ ವಿಫಲವಾದುವು. ಆಗ ಅಲ್ಲಿ ಇಂಥ ವ್ಯವಸ್ಥೆಯನ್ನು ಒಪ್ಪಿಕೊಳ್ಳಲಾಯಿತು. 

	ಕರ್ನಾಟಕ ಲೋಕಾಯುಕ್ತ 1984ರ ಕಾಯಿದೆ ಪ್ರಕಾರ ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರನ್ನು ನೇಮಕಮಾಡುವ ಅಧಿಕಾರವನ್ನು ರಾಜ್ಯಪಾಲರಿಗೆ ಕೊಟ್ಟಿದೆ. ಲೋಕಾಯುಕ್ತರಾಗಿ ನೇಮಕಗೊಳ್ಳುವ ವ್ಯಕ್ತಿ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸಿರ ಬೇಕು, ಇಲ್ಲವೇ ಯಾವುದೇ ಉಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿರಬೇಕು. ಯಾವುದೇ ಸಾರ್ವಜನಿಕ ನೌಕರನ ವಿರುದ್ಧ ಮಾಡುವ ಆರೋಪಗಳನ್ನೂ ದೂರುಗಳನ್ನೂ ತನಿಖೆಮಾಡುವ ಅಧಿಕಾರ ಲೋಕಾಯುಕ್ತಕ್ಕೆ ಇದೆ. ಅನ್ಯಾಯಕ್ಕೆ ಅಥವಾ ಸಂಕಷ್ಟಕ್ಕೆ ಒಳಗಾದವರಿಗೆ ಶೀಘ್ರ ಪರಿಹಾರ ಒದಗಿಸುವುದು ಇದರ ಪ್ರಧಾನ ಉದ್ದೇಶ. ಲೋಕಾಯುಕ್ತ ಕಾಯ್ದೆ ವ್ಯಾಪ್ತಿಯಲ್ಲಿ ತನಿಖೆಗೆ ಒಳಪಡುವ ಆಸ್ತಿಯ ವಿವರಗಳು, ಪತ್ರಗಳು ಹಾಗೂ ಇತರೆ ದಾಖಲೆಗಳನ್ನು ಪಡೆದುಕೊಳ್ಳುವ ಅಧಿಕಾರವನ್ನು ಲೋಕಾಯುಕ್ತರಿಗೆ ನೀಡಲಾಗಿದೆ. ಉದಾಹರಣೆಗೆ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿ üಸಿದಂತೆ ದಾಖಲೆಗಳನ್ನು ಪಡೆದುಕೊಳ್ಳುವ, ತನಿಖೆಗೆ ಬೇಕಾಗುವ ವ್ಯಕ್ತಿಗಳನ್ನು ಕರೆಸಿಕೊಳ್ಳುವ ಹಾಗೂ ಪ್ರಕರಣಕ್ಕೆ ಅಗತ್ಯವಾಗಿ ಬೇಕಾಗುವ ಪ್ರಮಾಣಪತ್ರ (ಅಫಿಡವಿಟ್) ಮತ್ತು ಸಾಕ್ಷ್ಯಗಳನ್ನು ಸ್ವೀಕರಿಸುವ ಅಧಿಕಾರವನ್ನು ಇವರಿಗೆ ನೀಡಲಾಗಿದೆ. ಸುಳ್ಳು ಫಿರ್ಯಾದು ಅಥವಾ ದೂರು ನೀಡುವ ವ್ಯಕ್ತಿ ವಿರುದ್ಧ ಕ್ರಮ ಜರಗಿಸುವ, ಶಿಕ್ಷೆಗೆ ಶಿಫಾರಸು ಮಾಡುವ ಅಧಿಕಾರವೂ ಇವರಿಗೆ ಇದೆ. 

	ಈ ವ್ಯವಸ್ಥೆಯಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಶಿಫಾರಸು ಮಾಡುವ ಅಧಿಕಾರವಿದೆಯೇ ಹೊರತು ಶಿಕ್ಷೆಗೊಳ ಪಡಿಸುವ ಅಧಿಕಾರವಿಲ್ಲ. ಸರ್ಕಾರ ಈ ಶಿಫಾರಸುಗಳನ್ನು ತನ್ನ ಇಷ್ಟಕ್ಕೆ ಅನುಗುಣವಾಗಿ ಜಾರಿಗೊಳಿಸಬಹುದು.
	
(ಸಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ